ಚಾಮರಾಜನಗರ : ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮಕ್ಕೆ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಭೇಟಿ ನೀಡಿ ಕುಸಿದಿರುವ ಹೊಸಹಳ್ಳಿ ಕಾಲುವೆ ಸೇತುವೆ ಪರಿಶೀಲಿಸಿದರು.
ಜಮೀನಿಗೆ ಹೋಗುವ ಜನರಿಗೆ ಹಾಗೂ ಬೆಳೆದ ಬೆಳೆಗೆ ಸಾಗಾಣಿಕೆಗೆ ಸಣ್ಣ ಸೇತುವೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಪರಿಶೀಲಿಸಿದ ಅಧ್ಯಕ್ಷರು ಸೇತುವೆ ಕಾಮಗಾರಿ ಕೈಗೊಳ್ಳಲು ಕಾಮಗಾರಿ ಪಟ್ಟಿಗೆ ಸೇರ್ಪಡೆ ಮಾಡಿ ಕ್ರಿಯಾ ಯೋಜನೆಗೆ ಸೇರಿಸಬೇಕು. ತ್ವರಿತವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ತಾಲೂಕಿನಲ್ಲಿ ಕುಡಿಯುವ ನೀರು ಇನ್ನಿತರ ಯೋಜನೆಗಳು ನಡೆಯುತ್ತಿವೆ. ಗಡಿ ಅಭಿವೃದ್ದಿ ಪ್ರಾಧಿಕಾರದಿಂದ ೧ ಕೋಟಿ ರೂ. ಅನುದಾನ ಬಂದಿದ್ದು ಸೋಲಿಗರ ಕಾಲೋನಿಗಳು, ಗ್ರಂಥಾಲಯಗಳ ಅಭಿವೃದ್ದಿಯಾಗಲಿವೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿ.ಎನ್. ಬಾಲರಾಜು, ಇತರರು ಇದ್ದರು.