
ಚಾಮರಾಜನಗರ: ಭಾರತದಲ್ಲಿ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ಉಣಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಮಗ್ರ ಚರಿತ್ರೆಯನ್ನು ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಇನ್ನಷ್ಟು ವಿಸ್ತಾರವಾಗಿ ತಿಳಿಸುವ ಅವಶ್ಯವಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿತ್ತೂರು ಒಂದು ಚಿಕ್ಕ ಸಂಸ್ಥಾನವಾಗಿದ್ದರೂ ಮರಾಠರು, ನಿಜಾಮರು, ಬ್ರಿಟಿಷರೊಂದಿಗೆ ರಾಜೀಯಯಾಗದ ಸ್ಪೂರ್ತಿಯುತ ಹೋರಾಟದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ರಾಣಿ ಚೆನ್ನಮ್ಮ ಅವರು ಚಿಕ್ಕವಯಸ್ಸಿನಲ್ಲೇ ಎಲ್ಲಾ ಬಗೆಯ ಯುದ್ಧ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು. ಅವರ ಇತಿಹಾಸ, ಅದರ್ಶ ಹೋರಾಟದ ಬದುಕನ್ನು ಪಠ್ಯಪುಸ್ತಕದಲ್ಲಿ ಸವಿಸ್ತಾರವಾಗಿ ತಿಳಿಸುವ ಅಗತ್ಯವಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠ ಧರ್ಮಕ್ಷೇತ್ರದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಯವರು ಮಾತನಾಡಿ ರಾಣಿ ಚೆನ್ನಮ್ಮನವರ ಜನ್ಮದಿನವನ್ನು ೨೦೧೭ರಿಂದ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ರಾಣಿ ಚೆನ್ನಮ್ಮ ಜಯಂತಿಯನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಆಯೋಜಿಸಲಾಗುತ್ತಿತ್ತು. ಅದನ್ನು ದಕ್ಷಿಣ ಭಾಗಕ್ಕೂ ಪರಿಚಯಿಸುವ ಸಲುವಾಗಿ ಈ ಬಾರಿ ಚಾಮರಾಜನಗರದಲ್ಲಿ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿಮರ್ಶಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ ಅವರು ಮಾತನಾಡಿ ಇತಿಹಾಸದಲ್ಲಿ ವಸಾಹತುಶಾಹಿ ನೀತಿಯನ್ನು ಒಪ್ಪಿಕೊಳ್ಳದೇ ಬ್ರಿಟಿಷರಿಗೆ ಸೆಡ್ಡುಹೊಡೆದ ಮೊದಲ ಮಹಿಳೆ ಎಂದರೇ ಅದು ರಾಣಿ ಚೆನ್ನಮ್ಮ ಎಂದರು.
ಅತ್ಮಾಭಿಮಾನ, ಆತ್ಮಗೌರವ, ಸ್ವಾಭಿಮಾನದ ಸಂಕೇತವಾಗಿದ್ದ ರಾಣಿ ಚೆನ್ನಮ್ಮ ಈ ನೆಲಕ್ಕಾಗಿ ಬಹುದೊಡ್ಡ ಸ್ವಾತಂತ್ರ್ಯ ಕಹಳೆ ಮೊಳಗಿಸಿ, ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಇತಿಹಾಸ ಎಂದಿಗೂ ಬತ್ತದ ಸೆಲೆಯಾಗಿದೆ. ಆಧುನಿಕ ಜಾಗತಿಕರಣದ ಇಂದು ಮಹಿಳೆಯರು ಸಬಲೀಕರಣಕ್ಕಾಗಿ ಹೋರಾಡುತ್ತಿದ್ದೇವೆ. ಚೆನ್ನಮ್ಮನವರು ಅಂದಿನ ಕಾಲದಲ್ಲೇ ಮಹಿಳಾ ಸಬಲೀಕರಣದ ಪ್ರತೀಕವಾಗಿದ್ದರು. ಬ್ರಿಟಿಷರ ರಾಜತಾಂತ್ರಿಕ ನೀತಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು ಎಂದು ಅವರು ತಿಳಿಸಿದರು.
ರಾಣಿ ಚೆನ್ನಮ್ಮನವರ ಸ್ವಾತಂತ್ರದ ಪರಿಕಲ್ಪನೆ, ರಾಷ್ಟ್ರೀಯತೆಯ ಪ್ರಜ್ಞೆ,ಯನ್ನು ಜನರಲ್ಲಿ ತುಂಬಿ ಹುರಿದುಂಬಿಸಿದರು. ಪರಂಪರಾಗತ ಹಾಗೂ ಸಂಸ್ಕಾರಯುತ ಗೃಹಿಣಿ, ಸಮಯೋಚಿತ ನಿರ್ಧಾರ, ಗಂಭೀರ ನಡೆ, ನುಡಿ ಸೇವಾನಿಷ್ಠೆಯಿಂದ ಬ್ರಿಟಿಷರ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟ ಚೆನ್ನಮ್ಮ ಜನಮಾನಸದಲ್ಲಿ ಇಂದಿಗೂ ಆದರ್ಶ ಹಾಗೂ ಅಜರಾಮರರಾಗಿದ್ದಾರೆ ಎಂದು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ ಅವರು ಹೇಳಿದರು.
ಇದೇ ವೇಳೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.
ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮಿ, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಅವರ ನಿಧನ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಸದಸ್ಯರಾದ ಮಮತಾ ಬಾಲಸುಬ್ರಮಣ್ಯಂ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ತಹಶೀಲ್ದಾರ್ ಬಸವರಾಜು, ಚಾಮುಲ್ ಅಧ್ಯಕ್ಷರಾದ ನಾಗೇಂದ್ರಪ್ರಸಾದ್, ಸಮಾಜದ ಮುಖಂಡರಾದ ಮಲ್ಲೇಶ್, ಮೋಹನ್, ಪುಟ್ಟಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮದಲ್ಲಿ ಗದಗಿನ ಶಂಕರಪ್ಪ, ರಾಮಪ್ಪ, ಸಂಕಣ್ಣನವರ ಮತ್ತು ತಂಡದಿಂದ ನಡೆಸಿಕೊಟ್ಟ ಗೀತ ಗಾಯನ ಗಮನ ಸೆಳೆಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದಿಂದ ವಿವಿಧ ಜಾನಪದ ಕಲಾತಂಡಗಳೊಡನೆ ಹೊರಟ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಗೆ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ, ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮಿ, ಶ್ರೀ ಚನ್ನಬಸವಸ್ವಾಮಿ, ಇತರೆ ಗಣ್ಯರು ಚಾಲನೆ ನೀಡಿದರು.
