ಹಾಸನ: ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಜನಾರ್ಧನ್ ಎಚ್ಚರಿಕೆ ನೀಡಿದ್ದಾರೆ.
ಬೇಲೂರು ಪಟ್ಟಣದಲ್ಲಿ ಕೆಲವು ಔಷಧಿ ಅಂಗಡಿಗಳು ಹಾಗೂ ದಾಸ್ತಾನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಒಟ್ಟು 74 ರಸಗೊಬ್ಬರ ಮಾರಾಟಗಾರರಿದ್ದು ಇದರಲ್ಲಿ ಪ್ರಾಥಮಿಕ ಕೃಷಿ ಸಂಘದಲ್ಲಿ 34 ಹಾಗೂ ಖಾಸಗಿ ರಸಗೊಬ್ಬರ ಮಾರಾಟ ಮಾಡಲು 40 ಅಂಗಡಿಗಳಲ್ಲಿ ಅನುಮತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ದಾಸ್ತಾನು ಇಲ್ಲ ಎಂದು ರೈತರಿಗೆ ಹೇಳುವಂತಿಲ್ಲ. ನಿಗದಿತ ದರದ ಪಟ್ಟಿಯನ್ನು ಕಣ್ಣಿಗೆ ಕಾಣುವಂತೆ ಹಾಕಬೇಕು.
ಜೂನ್ ತಿಂಗಳವರಗೆ ಯಾವುದೇ ರೀತಿಯ ರಸಗೊಬ್ಬರ ಕೊರತೆ ನಮ್ಮ ತಾಲೂಕಿನಲ್ಲಿ ಇರುವುದಿಲ್ಲ. ಒಟ್ಟು 3286 ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಈಗಾಗಲೇ ನಮ್ಮ ಬಳಿ 1665 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದ್ದು, ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಮಾರಾಟ ಮಾಡಬಾರದು, ಒಂದು ವೇಳೆ ಮಾರಾಟ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಳೆ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದರೂ ಇದು ಕೃಷಿ ಚಟುವಟಿಕೆಗೆ ಪೂರಕವಾಗಿಲ್ಲ. ಜನವರಿಯಿಂದ ಜೂನ್ ತಿಂಗಳವರೆಗೂ 239 ಮಿಲಿಮೀಟರ್ ಆಗಬೇಕಿದ್ದ ಮಳೆಯ ಪ್ರಮಾಣ 279 ಮಿ.ಮೀ ಆಗಿದೆ. ಇತ್ತೀಚಿಗೆ 8 ದಿನಗಳಲ್ಲಿ ಸುಮಾರು 10 ಮಿ.ಮೀ ಮಳೆ ಆಗಿದ್ದು ಕೃಷಿಗೆ ಪೂರಕವಾಗಿಲ್ಲ. ನಮ್ಮಲ್ಲಿ ಹಳೇಬೀಡು, ಮಾದಿಹಳ್ಳಿ ಹೋಬಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜೂನ್ 10 ರಿಂದ ಮಳೆ ಪ್ರಾರಂಭ ವಾಗುವ ಹಿನ್ನಲೆಯಲ್ಲಿ ಬೇಲೂರು ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು 500 ಹೆಕ್ಟೇರ್ ಪ್ರದೇಶದಲ್ಲಿ ತಮ್ಮ ಬಿತ್ತನೆ ಕಾರ್ಯ ಆರಂಭ ಮಾಡಲಿದ್ದಾರೆ. ಅರೇಹಳ್ಳಿ, ಬಿಕ್ಕೋಡು, ಹಗರೆ ಸೇರಿದಂತೆ ಎಲ್ಲ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ನೀಡಲು ಪೂರ್ವ ಸಿದ್ದತೆ ಮಾಡಲಾಗಿದೆ ಎಂದು ತಿಳಿಸಿದರು.