ಯಳಂದೂರು: ರಾಜ್ಯದಲ್ಲಿ ಅತೀ ಹೆಚ್ಚು ಆದಿವಾಸಿ ಬುಡಕಟ್ಟು ಜನಾಂಗ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರಸ್ವಾಮಿ ವನ್ಯಜೀವಿಧಾಮ ಸೇರಿದಂತೆ ಜಿಲ್ಲೆಯ ವಿವಿಧ ವನ್ಯಧಾಮಗಳಲ್ಲಿ ವಾಸ ಮಾಡುತ್ತಿದ್ದು ಇವರು ಕೊರೊನಾದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ ಇವರ ನೆರವಿಗೆ  ಬೆಂಗಳೂರಿನ ಕೊರೊನಾ ಕೇರ್ ಸಂಸ್ಥೆಯು ದಿ ಗುಡ್ ಕ್ವಿಸ್ಟ್ ಫೌಂಡೇಶನ್, ಹೋಪ್ ಪ್ರಾಜೆಕ್ಟ್ ವಿಷನ್, ಬ್ರೀಡ್ಸ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಅ.ಐ.ಎಫ್.ಓ., ಹಾಗೂ ಓರೀಯನ್ ಸೇವಾ ಸಂಸ್ಥೆಗಳು ಧಾವಿಸಿವೆ.

ಕೊರೊನಾ ಎರಡನೇ ಅಲೆಯು ಎಲ್ಲೆಡೆ ವ್ಯಾಪಿಸಿರುವುದರಿಂದ ಬುಡಕಟ್ಟು ಸಮುದಾಯಗಳಿಗೂ ಕೊರೊನಾ ಲಗ್ಗೆಯಿಟ್ಟಿದೆ. ಪರಿಣಾಮವಾಗಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಲಾಕ್‌ ಡೌನ್ ಹಿನ್ನಲೆಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳು ತಮ್ಮ ಕಾಡಿನ ಉಪ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದು ತುತ್ತು ಕೂಳಿಗೂ ಪರದಾಡುವಂತಾಗಿತ್ತು. ಇದನ್ನರಿತು ಬೆಂಗಳೂರಿನ ಸೇವಾ ಸಂಸ್ಥೆಗಳು ಹಾಡಿಗೆ ತೆರಳಿ ಸಹಾಯ ಹಸ್ತ ಚಾಚಿವೆ.

ಸುಮಾರು 13 ಲಕ್ಷದ 50 ಸಾವಿರ ರೂ ಮೌಲ್ಯದ ಒಂದು ತಿಂಗಳಿಗೆ ಆಗುವಷ್ಟು ಪಡಿತರ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯಕಿಟ್, ಗಿರಿಜನ ಕೋವಿಡ್ ಕೇರ್ ಸೆಂಟರ್‌ಗಳಿಗೆ ನಾಲ್ಕು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಿವೆ. ವಿಶೇಷವಾಗಿ ಗಿರಿಜನ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಿವೆ. ಪುರಾಣಿಪೋಡು, ಜೀರಿಗೆಗದ್ದೆ, ಮಾವತ್ತೂರು, ನಲ್ಲಿಕತ್ರಿ, ಗೊಂಬೆಗಲ್ಲು, ಕೆರೆದಿಂಬ, ಕಡಕಲಕಿಂಡಿ, ಹಾವಿನಮೋಳೆ, ಸೇಬಿನಕೋಬೆ, ಮಾವತ್ತುರು, ಜಡೇಸ್ವಾಮಿದೊಡ್ಡಿ, ಬಂಗ್ಲೇಪೋಡು, ಹೊಸಪೋಡು, ಮುತ್ತುಗದ್ದೆಪೋಡು, ಕಲ್ಯಾಣಿಪೋಡು, ಮಂಜಿಗುಡ್ಡಿಪೋಡು, ಯರಕನಗದ್ದೆ, ಸೀಗೆಬೆಟ್ಟಿ, ಈರನಕಟ್ಟೆಪೋಡು, ಸೇರಿದಂತೆ ಆಯ್ದ ಹತ್ತಾರು ಪೋಡುಗಳ 700 ಕುಟುಂಬಗಳಿಗೆ ಪಡಿತರವನ್ನು ವಿತರಿಸಿ ಕೋವಿಡ್‌ನ ಈ ಸಂಕಷ್ಟ ಸಮಯದಲ್ಲಿ ಗಿರಿಜನರಿಗೆ ನೆರವಾಗಿವೆ. ಜೊತೆಗೆ ಗಿರಿಜನ ಹಾಡಿಗಳಿಗೆ ಪಡಿತರ ಕಿಟ್ ವಿತರಿಸುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ, ಕಡ್ಡಾಯವಾಗಿ ಪ್ರತಿಯೊಬ್ಬರು ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ಕೊರೊನಾ ಕೇರ್ ಬೆಂಗಳೂರು ಫೌಂಡೇಶನ್ ಹಾಗೂ ದಿ ಗುಡ್ ಕ್ವಿಸ್ಟ್ ಫೌಂಡೇಶನ್‌ನ ಸಂಯೋಜಕರಾದ ವಿನೋದ್‌ಕುಮಾರ್ ಮಾತನಾಡಿ ಕೋವಿಡ್‌ನ ಈ ಎರಡನೇ ಅಲೆಯ ಸಮಯದಲ್ಲಿ ಕಾಡಿನಲ್ಲಿ ವಾಸ ಮಾಡುವ ಗಿರಿಜನರು ಕೂಲಿ ಸಿಗದೆ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವುದರ ಜೊತೆಗೆ, ಅಪೌಷ್ಠಿಕತೆಯಿಂದ ಬಳಲುತ್ತಿದ್ದರು. ಇದನ್ನು ತಿಳಿದು ನಮ್ಮ  ಆರು ಸ್ವಯಂ ಸೇವಾ ಸಂಸ್ಥೆಗಳು ಅವರಿಗೆ ಒಂದು ತಿಂಗಳಿಗಾಗುವಷ್ಟು ಪಡಿತರ ವಿತರಣೆ ಮಾಡಿದ್ದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಒಡನಾಡಿ ಪರಶುರಾಮ್, ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಬಿಳಿಗಿರಿರಂಗನಬೆಟ್ಟದ ಸೋಲಿಗ ಮುಖಂಡರಾದ ಬೊಮ್ಮಯ್ಯ, ಮಾವತ್ತೂರು ಹಾಡಿಯ ಸೋಲಿಗ ಮುಖಂಡರಾದ ಚಂದ್ರಪ್ಪ ಸೇರಿದಂತೆ ಹಲವರು ಇದ್ದರು.

 

By admin