ಸರಗೂರು: ತಾಲ್ಲೂಕಿನ ಕಲ್ಲಹಳ್ಳ ಗ್ರಾಮದ ಜಮೀನಿನಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ದಾಳಿ ನಡೆಸಿ, ತಿಂದು ನಾಶಗೊಳಿಸಿವೆ.
ಶನಿವಾರ ರಾತ್ರಿ ಕಾಡಿನಿಂದ ಹೊರಬಂದ ಕಾಡಾನೆಗಳು ಗ್ರಾಮದ ಪುಟ್ಟಸಿದ್ದಪ್ಪ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಬೆಳೆಯಲಾದ ಬಾಳೆ ತೋಟವನ್ನು ತಿಂದು ನಾಶಗೊಳಿಸಿವೆ. ಅಲ್ಲದೆ ಪೈಪ್ಗಳು, ತಂತಿ ಬೇಲಿ ಕಲ್ಲುಗಳು, ತೆಂಗಿನ ಗಿಡಗಳು ಸೇರಿದಂತೆ ತಡೆಗೋಡೆಯ ಕಬ್ಬಿಣದ ಸರಳುಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿವೆ.
ಮೊಳೆಯೂರು ವಲಯ ಅರಣ್ಯದಂಚಿನಿಂದ ಕಾಡಾನೆಗಳು ಜಮೀನಿತ್ತ ಬಂದಿದ್ದು, ಕಾಡಾನೆಗಳು ದಾಳಿ ಮಾಡಿ ಜಮೀನಿನಲ್ಲಿ ಬೆಳೆಯಲಾದ ಬೆಳೆಗಳನ್ನು ನಾಶಗೊಳಿಸುತ್ತಿವೆ. ವಲಯ ಅರಣ್ಯಾಧಿಕಾರಿ ಜಿ.ಪುಟ್ಟರಾಜು ಅವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡಾನೆಗಳಿಂದಾಗುವ ಬೆಳೆ ನಷ್ಟದ ಪರಿಹಾರ ಸಮರ್ಪಕವಾಗಿ ಸಿಗೋದಿಲ್ಲಾ. ಹೀಗಾಗಿ ಕೂಡಲೇ ಆರ್ಎಫ್ಒ ಅವರನ್ನು ವಗರ್ಾವಣೆ ಮಾಡಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟಿಸಿದರು.
ರಾತ್ರಿ ಕಾವಲುಗಾರರು ಸಮರ್ಪಕವಾಗಿ ಬರುತ್ತಿಲ್ಲ. ಆನೆ ಒಂದೆಡೆ ಬಂದರೆ ಕಾವಲುಗಾರರು ಒಂದೆಡೆ ಇರುತ್ತಾರೆ. ಕಾಡಿನಿಂದ ಆನೆ ಬಂದ ವಿಷಯ ತಿಳಿಸಿದರೆ ಬರುವುದಾಗಿ ಸಮಾಜಾಯಿಷಿ ಹೇಳುತ್ತಾರೆ. ಹೀಗಾಗಿ ಕೂಡಲೇ ಕಾಡಾನೆಗಳು ನಾಡಿನತ್ತ ಬರುವುದನ್ನು ಕೂಡಲೇ ಅಧಿಕಾರಿಗಳು ತಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಿವಕುಮಾರ್ ಎಚ್ಚರಿಸಿದರು.
ಮೂರು ತಿಂಗಳ ಹಿಂದೆಯೂ ಇದೇ ರೀತಿ ಕಾಡಾನೆಗಳು ಜಮೀನಿನತ್ತ ನುಗ್ಗಿ ಬಾಳೆ, ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶಗೊಳಿಸಿದ್ದವು. ಎಸಿಎಫ್ ರವಿಕುಮಾರ್ ಸ್ಥಳಕ್ಕಾಗಮಿಸಿ ಕಾಡಿನಿಂದ ಆನೆಗಳು ಬರುವುದನ್ನು ತಪ್ಪಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅದು ಹುಸಿಯಾಗಿದೆ. 15 ದಿನಗಳಿಂದ ಕಾಡಾನೆಗಳು ನಿತ್ಯ ರೈತರ ಜಮೀನತ್ತ ಬರುತ್ತಿವೆ ಎಂದು ರೈತರು ದೂರಿದರು.
ಗ್ರಾಮಸ್ಥರಾದ ಮದೇವಪ್ಪ, ಪ್ರಕಾಶ್, ಮಂಗಳಪ್ಪ, ಸುರೇಶ್, ವೇಣುಗೋಪಾಲ್, ಪ್ರಜೇಶ್, ನಾಗೇಂದ್ರ, ಸೋಮಶೇಖರ್, ಮಧುಕುಮಾರ್, ಗಣೇಶ್, ರವಿಕುಮಾರ್, ಯೋಗೀಶ್, ಶಿವಕುಮಾರ್, ಅರಣ್ಯ ರಕ್ಷಕ ಎಂ.ಆರ್.ಹನುಮಂತಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.