ಬೆಂಗಳೂರು: ನೂರ ಹದಿನಾಲ್ಕು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನಲ್ಲಿ ಅಮೂಲಾಗ್ರ ಬದಲಾವಣೆಗೆ ಒತ್ತು ನೀಡಿದ್ದು ಪರಿಷತ್ತಿನ ಕಾರ್ಯಚಟುವಟಿಕೆ ಹಾಗೂ ಸದನದ ಕಾರ್ಯಕಲಾಪಗಳನ್ನು ಕಾಗದ ರಹಿತವನ್ನಾಗಿ ಮಾಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಸಂಸದೀಯ ಕಾರ್ಯವಿಧಾನ ಕುರಿತು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ರವರು ದೇಶದ ಎಲ್ಲ ರಾಜ್ಯಗಳ ವಿಧಾನ ಮಂಡಲಗಳ ಸಭಾಪತಿಗಳು ಹಾಗೂ ಸಭಾಧ್ಯಕ್ಷರೊಂದಿಗೆ ಮಂಗಳವಾರ ನಡೆಸಿದ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು ರಾಜ್ಯ ವಿಧಾನ ಪರಿಷತ್ತನ್ನು ಮಾದರಿ ವಿಧಾನ ಪರಿಷತ್ತನ್ನಾಗಿ ಮಾಡುವ ಸಂಕಲ್ಪದೊಂದಿಗೆ ಹಲವು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇ-ವಿಧಾನ ಕಾರ್ಯಕ್ರಮದಡಿ ವಿಧಾನ ಪರಿಷತ್ತನ್ನು ಕಾಗದರಹಿತವನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ. ಸದನದ ಕಲಾಪ, ಪ್ರಶ್ನೋತ್ತರ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಕಳೆದ ವಿಧಾನ ಮಂಡಲದ ಬಜೆಟ್ ಅಧಿವೇಶನದಿಂದಲೇ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ರಾಜ್ಯ ಸಭೆಯ ಮಾದರಿಯಲ್ಲಿ ಮಾಡಲಾಗುತ್ತಿದ್ದು, ನಿಗದಿತ ವೇಳೆ ಹಾಗೂ ಅವಧಿಯಲ್ಲಿಯೇ ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿದಂತೆ ವಿವಿಧ ಕಾರ್ಯಕಲಾಪಗಳನ್ನು ನಡೆಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿಯೂ ಸರಕಾರದ ಸೂಕ್ತ ನಿರ್ದೇಶನಗಳನ್ನು ಪಾಲಿಸಿ ಯಶಸ್ವಿಯಾಗಿ ಸದನದ ಕಲಾಪಗಳನ್ನು ನಡೆಸಲಾಗಿದೆ. ಕೋವಿಡ್ ಕುರಿತು ನಾಗರಿಕರಲ್ಲಿ ಜನಜಾಗೃತಿ ಹಾಗೂ ಮುಂಜಾಗ್ರತೆ ವಹಿಸುವಲ್ಲಿ ರಾಜ್ಯದ ವಿಧಾನ ಪರಿಷತ್ ಸದಸ್ಯರ ಪಾತ್ರ ಅನುಕರಣೀಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೋಕ ಸಭಾಧ್ಯಕ್ಷರಾಗಿ ತಾವು ಸದನದ ಕಲಾಪ ನಡೆಸಿದ ರೀತಿ, ಹಾಗೂ ಅನುಭವಗಳನ್ನು ಹಂಚಿಕೊಂಡರು. ಸಭೆಯಲ್ಲಿ ಕರ್ನಾಟ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಪಾಲ್ಗೊಂಡು ವಿಚಾರ ಮಂಡಿಸಿದರು.