ಮೈಸೂರು: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವ ಕಾರಣ ಜಲಾಶಯದಿಂದ ಸುಮಾರು ಐದು ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಹೆಚ್.ಡಿ.ಕೋಟೆ ತಾಲ್ಲೂಕಿನ, ಜಲಾಶಯ ವಿಭಾಗದ ಕಾರ್ಯಪಾಲಕ ಅಭಿಯಂತರ ಸಿ.ಬಿ. ಸುರೇಶ್ ಬಾಬು ಅವರು ಕಬಿನಿ ಜಲಾಶಯಕ್ಕೆ 16200 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದೆ ಜಲಾಶಯದ ಒಳ ಹರಿವಿನ ಪ್ರಮಾಣ ಆಧರಿಸಿ, ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ತಿಳಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಒಂದು ಸುಂದರ ಪ್ರವಾಸಿ ತಾಣವೂ ಹೌದು. ಕೇರಳದಲ್ಲಿ ಧಾರಾಕಾರವಾಗಿ ಮಳೆಯಾದರೆ ಜಲಾಶಯ ಬಹುಬೇಗ ಭರ್ತಿಯಾಗುತ್ತದೆ. ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟರೆ ಜಲಾಶಯದ ತಳ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರೈತರ ಜಮೀನು, ಮನೆ, ಮುಳುಗಡೆಯಾಗುವುದಲ್ಲದೆ, ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಆದ್ದರಿಂದ ಜಲಾಶಯದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.