ಕೃಷ್ಣರಾಜಪೇಟೆ: ಕೊರೋನಾ ಎರಡನೇ ಅಲೆಯಲ್ಲಿ ಎಂಟಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮವನ್ನು ತಾಲೂಕು ಆಡಳಿತವು ಸೀಲ್‌ಡೌನ್ ಮಾಡಿ ಕಂಟೋನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.
ಕೊರೋನಾ ಮೊದಲ ಅಲೆಯಲ್ಲಿಯೂ ಕೋವಿಡ್ ಸೋಂಕಿತರು ಪತ್ತೆಯಾಗಿ ಸೀಲ್ ಡೌನ್ ಆಗಿದ್ದ ಜಾಗಿನಕೆರೆ ಗ್ರಾಮವು ಕೋವಿಡ್ ಎರಡನೇ ಅಲೆಯಲ್ಲಿಯೂ ಅತೀ ಹೆಚ್ಚು ಎಂಟು ಜನ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಇಡೀ ಗ್ರಾಮವನ್ನು ಲಾಕ್ ಡೌನ್ ಮಾಡಿದ್ದಲ್ಲದೇ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಸಕಾರಣವಿಲ್ಲದೆ ಮನೆಯಿಂದ ಯಾರೂ ಹೊರಬರಬಾರದು, ಮನೆಯಲ್ಲಿಯೇ ಇದ್ದುಕೊಂಡು ಜನತಾ ಕರ್ಫ್ಯೂ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕಿತರು ಪತ್ತೆಯಾಗಿರುವ ಮನೆಗಳಲ್ಲಿ ವಾಸಿಸುವ ಅವರ ಸಂಬಂಧಿಗಳು ಸಾರಂಗಿ ಗ್ರಾಮ ಪಂಚಾಯಿತಿ ಪಿಡಿಓ ಯೋಗೇಶ್ ಅವರಿಗೆ ತಿಳಿಸಿದರೆ ಮನೆಗೆ ಬೇಕಾದ ಅಗತ್ಯವಸ್ತುಗಳು ಸೇರಿದಂತೆ ಔಷಧಗಳನ್ನು ಒದಗಿಸಿಕೊಡಲಿದ್ದಾರೆ. ಆದ್ದರಿಂದ ಮಹಾಮಾರಿಯ ಆರ್ಭಟವನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು ತಾಲೂಕು ಆಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಹೋಂ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರು ಏನಾದರೂ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ ಓಡಾಡಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಅಧಿಕಾರಿಗಳಿಗೆ ಇಲ್ಲವೇ ಸ್ಥಳೀಯ ಆಶಾ ಅಂಗನವಾಡಿ ಕಾರ್ಯಕರ್ತೆಯರ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.