ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ್ದ ಕನ್ನಡ ಚಿತ್ರರಂಗದ ನಟ ಚೇತನ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ನಟ ಚೇತನ್ ಫೆಬ್ರವರಿ ೧೬ ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ಜಡ್ಜ್ ಒಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ. ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು. ಬಳಿಕ ಐಪಿಸಿ ಸೆಕ್ಷನ್ ೫೦೫(೨) ಮತ್ತು ೫೦೪ ಅಡಿ ಎಫ್‌ಐಆರ್ (fir  ಅಡಿ No40/2022 ದಾಖಲಿಸಿದ್ದಾರೆ.

ನಟ ಚೇತನ್ ಕುಮಾರ್ ಟ್ವೀಟ್ ಆಧರಿಸಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್  ದಾಖಲಾಗಿದೆ. ಮಾಹಿತಿಯ ಪ್ರಕಾರ, ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಚೇತನ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಚೇತನ್ ಅವರ ಪತ್ನಿ ಮೇಘಾ  ತಮ್ಮ ಪತಿಯನ್ನು ಕೆಲವು ಪೊಲೀಸ್ ಅಧಿಕಾರಿಗಳು ಕರೆದೊಯ್ದ ನಂತರ “ನಾಪತ್ತೆಯಾಗಿದ್ದಾರೆ” ಎಂದು ಆರೋಪಿಸಿದ್ದರು.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸ್ವತಃ ಲೈವ್‌ಗೆ ಹೋದ ಮೇಘಾ, ಯಾವುದೇ ಪೂರ್ವ ಸೂಚನೆ ಅಥವಾ ಕಾನೂನು ಸೂಚನೆ ನೀಡದೆ, ಚೇತನ್‌ನನ್ನು ತಮ್ಮ ಮನೆಯಿಂದ ಕರೆದೊಯ್ಯಲಾಯಿತು ಮತ್ತು ಈಗ ಅವರು ಎಲ್ಲಿದ್ದಾರೆಂಬುದು ತಿಳಿದಿಲ್ಲ ಎಂದು ಆರೋಪಿಸಿದ್ದಾರೆ.ಚೇತನ್ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ ಮ್ಯಾನ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲೂ ವಿಚಾರಿಸಿದ್ದೇವೆ. ಅವರು ಚೇತನ್ ತಮ್ಮ ವಶದಲ್ಲಿಲ್ಲ, ವಿಚಾರಣೆಗಾಗಿ ಬೇರೆಡೆ ಕರೆದೊಯ್ದಿದ್ದಾರೆ ಎಂದಿದ್ದಾರೆ. ಇದು ಒಂದು ರೀತಿಯ ಅಪಹರಣ ಎಂದು ಚೇತನ್ ಪತ್ನಿ ಮೇಘಾ ಆರೋಪಿಸಿದ್ದಾರೆ.