ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೌಕರರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ಹೊರತಂದಿರುವ ೨೦೨೩ರ ದಿನದರ್ಶಿಕೆ(ಕ್ಯಾಲೆಂಡರ್)ಯನ್ನು ಇಂದು ಬಿಡುಗಡೆಗೊಳಿಸಲಾಯಿತು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆರ್. ಲಿಂಗರಾಜು ಅವರು ಕ್ಯಾಲೆಂಡರ್ ಅನಾವರಣಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು ಅವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಚಂದ್ರಶೇಖರ್ ಅವರು ಕಳೆದ ೧೧ ವರ್ಷಗಳಿಂದ ಪ್ರತಿವರ್ಷ ದಿನದರ್ಶಿಕೆಯನ್ನು ಮುದ್ರಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯಲಿ, ಹೊಸ ವರ್ಷ ಎಲ್ಲಾ ನೌಕರರಿಗೂ ಹೊಸ ಹುಮ್ಮಸ್ಸು ತರಲಿ, ನೌಕರರು ಕೆಲಸ-ಕಾರ್ಯದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ರಾಜ್ಯ ಸರ್ಕಾರಿ ನೌಕರರ ಸಂಘ ನೌಕರರ ಹಿತ ಕಾಯಲು ಕಟ್ಟಿಬದ್ಧವಾಗಿದೆ. ಈ ಹಿಂದೆ ನೌಕರರ ಗಮನಕ್ಕೆ ಬಾರದೇ ತಲುಪುತ್ತಿದ್ದ ಮೂಗರ್ಜಿಗಳ ವಿಚಾರಣೆಯನ್ನು ಸರ್ಕಾರ ರದ್ದುಗೊಳಿಸಿದೆ. ಮಹಿಳೆಯರಿಗೆ ಶಿಶುಪಾಲನಾ ರಜೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಸರ್ಕಾರ ಏಳನೇ ವೇತನ ಆಯೋಗ ರಚಿಸಿದೆ. ಒಟ್ಟಾರೆ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೨೨ ಹೊಸ ಆದೇಶಗಳನ್ನು ಸರ್ಕಾರ ಹೊರಡಿಸಿದೆ ಎಂದರು.
ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇಪಿಂಚಣಿ ಯೋಜನೆ ಅಳವಡಿಸುವಂತೆ ಎನ್.ಪಿ.ಎಸ್ ನೌಕರರ ಆಶಯವಾಗಿದ್ದು, ಈ ಸಂಬಂಧ ನೌಕರರ ಸಂಘವು ಎನ್.ಪಿ.ಎಸ್ ನೌಕರರ ಸಂಪೂರ್ಣ ಸಹಕಾರ ನೀಡಲಿದೆ ಎಂದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಗೆ ಜಿಲ್ಲೆಯ ನೌಕರರಿಂದ ೩೬ ಲಕ್ಷ ದೇಣಿಗೆ ಸರ್ಕಾರಕ್ಕೆ ಜಮಾವಣೆಯಾಗಿದೆ. ಇದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕಾಂತರಾಜು, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಶೇಖರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‌ಕುಮಾರ್, ಆರೋಗ್ಯ ಇಲಾಖೆಯ ವ್ಯವಸ್ಥಾಪಕರಾದ ಅಸ್ಲಾಂ ಪಾಷ, ಶೋಭಾ, ಇತರರು ಕಾರ್ಯಕ್ರಮದಲ್ಲಿ ಇದ್ದರು.