ಬೆಂಗಳೂರು: ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾದುದು. ಆರೋಗ್ಯದಿಂದ ಇದ್ದಾಗ ಮಾತ್ರ ಜೀವನ ಎಲ್ಲ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.

ಹುಬ್ಬಳ್ಳಿಯ ತಮ್ಮ ಜೀವನಾಡಿಯಾದ ನಿಸರ್ಗ ತೋಟದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಮತ್ತು ಕಾರ್ಮಿಕರಿಗೆ ಹಾಗೂ ಸುತ್ತುಮುತ್ತಲಿನ ಗ್ರಾಮದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕೊವಿಡ್ ನ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ  ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಜಾಗರೂಕತೆಯಿಂದ ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸುವುದರ ಜೊತೆಗೆ  ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದರು.

ಪ್ರತಿಯೊಬ್ಬರಿಗೂ ಯಾವುದೇ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯದಿಂದ ಇರುವ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಯಾವುದೇ ಕೆಲಸ ಮಾಡಲು ಅನುಕೂಲ. ಆರೋಗ್ಯವೇ ಇಲ್ಲದಿದ್ದರೆ ಜೀವನ ವ್ಯರ್ಥ ಎಂದು ತಿಳಿಸಿದರು.

ಈಗಿನ ದಿನಗಳಲ್ಲಿ ಯಾರೇ ಕೆಮ್ಮಿದರೂ, ಸೀನಿದರೂ ಅದನ್ನು ಕೊರೋನಾ ಎಂದೇ ತಿಳಿಯುವ ಸ್ಥಿತಿ ಬಂದೊದಗಿರುವುದು ದುರದೃಷ್ಟಕರ. ವೈದ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ನೆರವಿನ ಹಸ್ತ ನೀಡಿದ್ದಾರೆ. ಇದನ್ನು ನೀವುಗಳೆಲ್ಲ ಸದುಪಯೋಗಪಡಿಸಿಕೊಂಡು ಅವರು ಹೇಳಿದ ಹಾಗೆ ಔಷಧ ಮಾತ್ರೆಗಳನ್ನು ತೆಗೆದುಕೊಂಡು ಎಲ್ಲರೂ ನಿರೋಗಿಗಳಾಗಿ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಿರಿ ಎಂದು   ಸಲಹೆ ನೀಡಿದರು.

 

By admin