ಚಿಂತಾಮಣಿ: ಆರೋಗ್ಯದ ಬಗ್ಗೆ ಜ್ಞಾನ ಮತ್ತು ಕಾಳಜಿ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದು ತಾಲೂಕು ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಆರೋಗ್ಯದ ಕುರಿತ ರಸಪ್ರಸ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಹಾಗು ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ತಿಳುವಳಿಕೆ ಹೊಂದಿರಬೇಕಾಗಿದೆ. ಆರೋಗ್ಯದ ಕಾಳಜಿ ಮತ್ತು ಆರೈಕೆ ಮುಖ್ಯ. ಸಾರ್ವಜನಿಕರು ಪ್ರತಿ ದಿನವೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಆರೋಗ್ಯ ಜ್ಞಾನ ವೃದ್ಧಿಗಾಗಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಮಾತನಾಡಿ ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ೨೦೧೮-೧೯ರಲ್ಲಿ ಸದೃಡ ಭಾರತ ನಿರ‍್ಮಾಣಕ್ಕಾಗಿ ಆಯುಸ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ರೂಪಿಸಿದೆ. ವಿವಿಧ ಬಗೆಯ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಯಾಗಿದೆ. ಬಿ.ಪಿಎಲ್. ಕುಟುಂಬದವರು ಯಾವುದೇ ಖರ್ಚಿಲ್ಲದೆ ಉಚಿತ ಆರೋಗ್ಯ ಪಡೆಯಬಹುದು. ತಾಯಿ ಮತ್ತು ಮಕ್ಕಳ ವಿವಿಧ ಯೋಜನೆಗಳು, ಲಸಿಕೆಗಳು, ವಿವಿಧ ಕಾಯಿಲೆಗಳ ಬಗ್ಗೆ ಅರಿತುಕೊಂಡು ಇತರರಿಗೂ ತಿಳಿಸಬೇಕಾಗಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರ ಆರೋಗ್ಯವಂತ ದೇಶ ನಿರ‍್ಮಾಣ ಮಾಡಲು ಸಾಧ್ಯ ಎಂದರು.
ಆರೋಗ್ಯ ಜ್ಞಾನದ ಕುರಿತು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪ್ರಗತಿ, ತೃತಿಯ ಬಿ.ಎಸ್ಸಿ., ದ್ವಿತೀಯ ಬಹುಮಾನ ರಮ್ಯ, ದ್ವಿತೀಯ ಬಿ.ಎಸ್ಸಿ., ತೃತೀಯ ಬಹುಮಾನ ಶ್ರೀಮತಿ ಶ್ರೀದೇವಿ, ದ್ವಿತೀಯ ಎಂ.ಕಾಂ. ಇವರಿಗೆ ನೀಡಲಾಯಿತು.
ಪ್ರಾಂಶುಪಾಲ ಪ್ರೊ.ಕೆ.ಆರ್.ಶಿವಶಂಕರ್ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎನ್.ಸಿ.ಸಿ. ಅಧಿಕಾರಿ ಪ್ರೊ.ಆರ್.ಶ್ರೀದೇವಿ, ರೇಂಜರ‍್ಸ್ ಅಧಿಕಾರಿ ಪ್ರೊ.ಎಸ್.ಪ್ರಮೀಳ, ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ವಿ.ಕೆ.ರಾಯಪ್ಪ ಮತ್ತು ಎನ್.ಸಿ.ಸಿ ಹಾಗು ವಿವಿಧ ತರಗತಿಗಳ ೮೦ ವಿದ್ಯಾರ್ಥಿನಿಯರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.