ಮೈಸೂರು: ನಗರದ ಬಲ್ಲಾಳ್ ವೃತ್ತದಲ್ಲಿ ಗುಡಿಸಲಲ್ಲಿ ವಾಸಿಸುತ್ತಾ ಹೊಟ್ಟೆಪಾಡಿಗಾಗಿ ಮಣ್ಣಿನ ಮಡಿಕೆ, ದೇವರ ವಿಗ್ರಹ, ಆಟಿಕೆ, ಹೂವಿನ ಕುಂಡಗಳನ್ನು ನಿರ್ಮಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಅಲೆಮಾರಿಗಳ ಬದುಕು ಮೂರಾಬಟ್ಟೆಯಾಗಿದೆ.
ಈ ಕುಟುಂಬಗಳು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಇವರು ಮಾಡಿದ ವಸ್ತುಗಳು ಮಾರಾಟವಾದರೆ ಮಾತ್ರ ಹೊಟ್ಟೆಗೆ ಅನ್ನ. ಇಲ್ಲದೆ ಹೋದರೆ ಉಪವಾಸವೇ ಗತಿ. ಇತರೆ ದಿನಗಳಲ್ಲಿ ಒಂದಷ್ಟು ವ್ಯಾಪಾರವಾಗಿ ಬದುಕು ಹಸನಾಗಿತ್ತಾದರೂ ಲಾಕ್ ಡೌನ್ ಕಾರಣ ಇವರ ವಸ್ತುಗಳನ್ನು ಖರೀದಿಸುವವರೇ ಇಲ್ಲವಾಗಿದೆ. ಹೀಗಾಗಿ ಇವರಿಗೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
ಬಹಳಷ್ಟು ಕಡೆಗಳಿಗೆ ತೆರಳಿ ಆಹಾರ ಕಿಟ್ ನೀಡುವವರು ಇವರತ್ತ ಬಾರದ ಕಾರಣ ಮಕ್ಕಳು ಸೇರಿದಂತೆ ದೊಡ್ಡವರು ಹಸಿವಿನಿಂದಲೇ ಬದುಕುವಂತಾಗಿದೆ. ಈ ವೃತ್ತದಲ್ಲಿ ಹೋಂಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜೂಲಿಯೆಟ್, ನಾಗವೇಣಿ ಅವರ ಕಷ್ಟವನ್ನು ಹತ್ತಿರದಿಂದ ನೋಡಿ ತಮ್ಮ ಕೈಲಾದ ಸಹಾಯ ಮಾಡಲು ತೀರ್ಮಾನಿಸಿದ್ದರು. ಇವರಿಗೆ ಕಾಂಗ್ರೆಸ್ ಯುವ ಮುಖಂಡರಾದ ನವೀನ್ ಎಂ ಕೆಂಪಿ. ಮತ್ತು ನಾಗೇಂದ್ರ ಪ್ರಸಾದ್ ಸಾಥ್ ನೀಡಿದ್ದು ಬಡಕುಟುಂಬಗಳಿಗೆ ಒಂದು ಹದಿನೈದು ದಿನಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮಗೆ ಬರುವ ಕಡಿಮೆ ವೇತನದಲ್ಲಿಯೂ ಒಂದಷ್ಟು ಉಳಿಸಿ ಅದರಿಂದ ಬಡ ಕುಟುಂಬಗಳಿಗೆ ನೆರವಾಗಿರುವ ಹೋಂಗಾರ್ಡ್ ಆಗಿರುವ ಜೂಲಿಯೆಟ್, ನಾಗವೇಣಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.