ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ನಗರದಲ್ಲಿಂದು ಆದ್ದೂರಿಯಾಗಿ ಆಚರಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಡಿವಾಳ ಮಾಚಿದೇವರು ನೇರ ಹಾಗೂ ನಿಷ್ಠುರ ಶರಣರಾಗಿದ್ದರು. ಅವರ ವಚನಗಳ ಸಾರವನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುನ್ನೆಡೆಯಬೇಕು ಎಂದರು.
ಮಡಿವಾಳ ಸಮುದಾಯ ಶಿಕ್ಷಣ ಸೌಲಭ್ಯಗಳನ್ನು ಪಡೆಯಬೇಕು. ಸಮುದಾಯವು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಎಲ್ಲಾ ಫಲ ಸಿಗಲಿದೆ. ನಿಮ್ಮೊಂದಿಗೆ ನಾವು ಸಹ ಇದ್ದೇವೆ. ನಿಮ್ಮ ಸವಲತ್ತುಗಳಿಗೆ ಎಲ್ಲಾ ನೆರವು ನೀಡುತ್ತೇವೆ. ನಗರದಲ್ಲಿ ದೋಬಿಘಾಟ್ ನಿರ್ಮಾಣಕ್ಕೆ ಅಗತ್ಯ ಸಹಾಯ ಮಾಡಲಾಗುವುದು. ಜಿಲ್ಲಾ ಸಮುದಾಯ ಭವನಕ್ಕೂ ನೆರವು ಒದಗಿಸಲಾಗುವುದೆಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರೆವೇರಿಸಿದ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಮಡಿವಾಳ ಮಾಚಿದೇವ ಅವರ ವಚನಗಳು ಅರ್ಥಪೂರ್ಣವಾಗಿವೆ. ಅವರ ಶಕ್ತಿ, ಪವಾಡಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದ ಅವರು ಮಡಿವಾಳ ಮಾಚಿದೇವ ಜಯಂತಿ ಶುಭಾಶಯಗಳನ್ನು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ವಿಚಾರವಾದಿಗಳು, ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಹ. ರಾ. ಮಹೇಶ್ ಅವರು ಮಾತನಾಡಿ ಮಡಿವಾಳ ಮಾಚಿದೇವರು ೧೨ನೇ ಶತಮಾನದ ವಚನ ಸಾಹಿತ್ಯಕಾರರ ಸಾಲಿನಲ್ಲಿ ತನ್ನದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿದ್ದರು. ಮಾಚಿದೇವರು ಅಂದಿನ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆ, ಲಿಂಗ ತಾರತಮ್ಯದಂತಹ ಹಲವಾರು ಅನಿಷ್ಠಗಳ ಪದ್ಧತಿಗಳ ವಿರುದ್ಧ ದನಿ ಎತ್ತಿದರು ಎಂದರು.
ಪ್ರಕೃತಿ ಮತ್ತು ಮನುಷ್ಯನೇ ದೇವರೆಂದು ಭಾವಿಸಿದ್ದ ಮಡಿವಾಳ ಮಾಚಿದೇವರು ವಚನಗಳ ರಕ್ಷಣೆಗೆ ಮುಂದಾದರು. ಮಡಿವಾಳ ಸಮುದಾಯ ಮನುಷ್ಯನ ಹೃದಯ, ಮೆದುಳು ಸ್ವಚ್ಚಗೊಳಿಸಿ ದೇಶಕಟ್ಟುವ ಕಾಯಕಕ್ಕೆ ಮುಂದಾಗಬೇಕು. ಮನೆಮನೆಯಲ್ಲೂ ವಚನ ಬರೆಯಲು ಪ್ರೇರೇಪಿಸಿದ ೧೨ನೇ ಶತಮಾನದ ಮಹತ್ವವನ್ನು ಅರಿಯಬೇಕು ಎಂದು ಹ. ರಾ. ಮಹೇಶ್ ಅವರು ಹೇಳಿದರು.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ರಾಜು ಎಂ. ತಲ್ಲೂರು ಅವರು ಮಾತನಾಡಿ ನಿಗಮದಿಂದ ನೀಡಲಾಗುವ ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ ಸೇರಿದಂತೆ ಹಲವಾರು ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಡಿವಾಳ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಧೃಢವಾಗಿ ಬೆಳೆಯಬೇಕು. ನಿಗಮಕ್ಕೆ ಅರ್ಜಿ ಹಾಕಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ ಚಿತ್ರದುರ್ಗದ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಜೀಯವರ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್. ಪೂವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್. ಗುರುಲಿಂಗಯ್ಯ, ಸಮುದಾಯದ ಮುಖಂಡರಾದ ದುಂಡುಮಾದಯ್ಯ, ಸಿದ್ದಯ್ಯ ಅವರು ಕಾರ್ಯಕ್ರಮದಲ್ಲಿ ಇದ್ದರು. .
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.
