ಬೆಂಗಳೂರು: ಕೋವಿಡ್-19 ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಲಾಕ್‍ಡೌನ್ ಘೋಷಿಸಿದ್ದು ಇದರಿಂದ ತೊಂದರೆಗೊಳಗಾದ ಜನರ ನಡುವೆ ಅತಿಥಿ ಉಪನ್ಯಾಸಕರು ಸೇರಿದ್ದು ಅವರಿಗೆ ಜನೆವರಿಯಿಂದ ಆಗಸ್ಟ್ ವರೆಗೆ (ಕೊರೊನಾ ಅವಧಿಯನ್ನು ಒಳಗೊಂಡಂತೆ) ಸೇವೆ ಎಂದು ಪರಿಗಣಿಸಬೇಕೆಂದು ಗೌರವಧನ ಮಂಜೂರು ಮಾಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಅತಿಥಿ ಉಪನ್ಯಾಸಕರಿಗೆ ಹಿಂದಿನ ವರ್ಷಗಳಲ್ಲಿ 9 ಅಥವಾ 10 ತಿಂಗಳನ್ನು ಸೇವಾ ಅವಧಿಯಾಗಿ ಪರಿಗಣಿಸಿ ಗೌರವಧನ ನೀಡುತ್ತಿದ್ದರು. ಆದರೆ 2020-21ರ ಶೈಕ್ಷಣಿಕ ಅವಧಿಯಲ್ಲಿ 2021ರ ಜನೆವರಿ ಮತ್ತು ಫೆಬ್ರುವರಿಯಲ್ಲಿ ತೆಗೆದುಕೊಂಡು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತೆ ಮೇ ತಿಂಗಳಲ್ಲಿ ತೆಗೆದುಕೊಂಡು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಈ ವರ್ಷ ಕೇವಲ 4 ತಿಂಗಳು ಮಾತ್ರ ಸೇವೆ ಆಗಿರುತ್ತದೆ. ಈ ಕೊರೋನಾ ರೋಗದ ಸಂಕಷ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೊರೊನಾ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ಜನೆವರಿಯಿಂದ ಆಗಸ್ಟ್ ವರೆಗೆ ಮುಂದುವರೆಸುವಂತೆ ಅವರಿಗೆ ಗೌರವಧನವನ್ನು ನೀಡಿದರೆ ಈ ವರ್ಷ 7 ಅಥವಾ 8 ತಿಂಗಳು ಸೇವಾ ಅವಧಿ ಸಿಗುವುದರಿಂದ ಅವರಿಗೆ ನಿಗದಿಪಡಿಸಿದ 1 ವರ್ಷಕ್ಕೆ 3 ಅಂಕಗಳು ದೊರೆಯುತ್ತವೆ. ಇದರಿಂದ ನೈಸರ್ಗಿಕ ನ್ಯಾಯ ದೊರಕಿದಂತಾಗುತ್ತದೆ. ಆದ್ದರಿಂದ ಅತಿಥಿ ಉಪನ್ಯಾಸಕರುಗಳಿಗೆ ಜನೆವರಿಯಿಂದ ಆಗಸ್ಟ್ ವರೆಗೆ (ಕೊರೊನಾ ಅವಧಿಯನ್ನು ಒಳಗೊಂಡಂತೆ) ಸೇವೆ ಎಂದು ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.