ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬೊಮ್ಮಲಾಪುರ ಹಾಗೂ ಶಿವಪುರ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣನವರ್ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಆರಂಭವಾಗಿದ್ದು, ಈ ವೇಳೆ ಯಾವುದೇ ರೀತಿಯ ಅನ್ಯ ಚಟುವಟಿಕೆ ನಡೆಸಬಾರದು. ಅಕ್ರಮ ಮದ್ಯ ಮಾರಾಟ, ಜೂಜಾಟ ಸೇರಿದಂತೆ ಜನರಿಗೆ ಬೆದರಿಕೆ ಹಾಕುವುದು ಗಮನಕ್ಕೆ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ರೌಡಿ ಶೀಟರ್ ಪಟ್ಟಿಯಲ್ಲಿರುವ ಹಲವು ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇವರು ಯಾವುದೇ ಅಕ್ರಮ ಚಟುವಟಿಕೆ ನಡೆಸಬಾರದು. ತಿಳಿದು ಬಂದರೆ ಗಡಿಪಾರು ಮಾಡಲಾಗುವುದು. ಶಾಂತಿಯುತವಾಗಿ ಪಂಚಾಯಿತಿ ಚುನಾವಣೆ ನಡೆಯಲು ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಯಾವುದೇ ರೀತಿಯ ಗಲಭೆಗೆ ಆಸ್ಪದ ನೀಡಬಾರದು ಎಂದು ತಿಳಿಸಿದರು.
ಅಕ್ರಮ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ಪೊಲೀಸರಿಗೆ ತಿಳಿಸಿ ಅಕ್ರಮ ತಡೆಗೆ ಸಹಕರಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆ ಆಗಿರುವುದರಿಂದ ಸ್ಥಳೀಯವಾಗಿ ಯಾರು ಸಹ ವೈಮನಸ್ಸು ಬೆಳೆಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ರಾಜೇಂದ್ರ ಸೇರಿದಂತೆ ಗ್ರಾಪಂ ಪಿಡಿಓಗಳು, ಸಾರ್ವಜನಿಕರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ