ಚಾಮರಾಜನಗರ: ಮೂಡನಂಬಿಕೆಗಳ ವಿರುದ್ದ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದ ಅಂಬಿಗರ ಚೌಡಯ್ಯನವರ ವಚನಗಳು ಪ್ರಸ್ತುತ ಸಮಾಜಕ್ಕೂ ಅವಶ್ಯಕವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಸಮಕಾಲೀನವರಾಗಿದ್ದ ಅಂಬಿಗರ ಚೌಡಯ್ಯ ಅವರು ವೃತ್ತಿಯಲ್ಲಿ ಅಂಬಿಗರಾಗಿದ್ದರೂ ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಿದ ಶರಣರು. ಸಮಾಜದಲ್ಲಿದ್ದ ಮೂಡನಂಬಿಕೆಗಳ ವಿರುದ್ದ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದವರು ಎಂದರು.
೧೨ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ರಚಿಸಿದ ವಚನಗಳು ನೇರವಾಗಿದ್ದವು. ಇವರ ವಿಚಾರ ಮೌಲ್ಯಗಳು ಎಲ್ಲರಿಗೂ ತಲುಪಬೇಕಿದೆ. ಪ್ರಸ್ತುತ ಸಮಾಜಕ್ಕೆ ಇವರ ವಚನಗಳು ಅವಶ್ಯಕವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಅಂಬಿಗರ ಚೌಡಯ್ಯನವರ ಜಯಂತಿ ಕೇವಲ ಆಚರಣೆಗಷ್ಟೇ ಸೀಮಿತವಾಗಬಾರದು. ಅವರ ವಚನಗಳ ಸಾರ ನಮಗೆ ದಾರಿ ದೀಪವಾಗಬೇಕು. ಅಂದಿನ ಕಾಲದಲ್ಲೇ ಅಂಬಿಗರ ಚೌಡಯ್ಯನವರ ವಚನಗಳು ಪರಿಣಾಮಕಾರಿಯಾಗಿ ಸದ್ದು ಮಾಡಿದವು ಎಂದರು.
ಚಾಮರಾಜನಗರ ಆದರ್ಶ ವಿದ್ಯಾಲಯದ ಶಿಕ್ಷಕರಾದ ಬಿ. ಅರ್ಕಪ್ಪ ಅವರು ಉಪನ್ಯಾಸ ನೀಡಿ ಸಮಾಜದ ಕಂದಾಚಾರ, ಮೂಢನಂಬಿಕೆ, ಅಸಮಾನತೆ, ಬಡವ ಶ್ರೀಮಂತ ಎಂಬ ಭೇದಭಾವಗಳ ಮಧ್ಯೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ವಿಚಾರ ಮೌಲ್ಯಗಳನ್ನು ವಚನಗಳಲ್ಲಿ ಸಾರಿದ ಅಂಬಿಗರ ಚೌಡಯ್ಯ ವಚನಕ್ರಾಂತಿಕಾರರಾಗಿದ್ದಾರೆ ಎಂದರು.
ಕಾಯಕ ನೋಡಿ ಜಾತಿಯನ್ನು ನಿಧರಿಸುತ್ತಿದ್ದ ಸಮಾಜದಲ್ಲಿ ತಮ್ಮ ಸತ್ಯವಾದ ವಚನಗಳಿಂದಲೇ ಮುನ್ನೆಲೆಗೆ ಬಂದವರು ಅಂಬಿಗರ ಚೌಡಯ್ಯನವರು. ಯಾರನ್ನು ಕೀಳಾಗಿ ಕಾಣಬಾರದು. ಎಲ್ಲಾ ವೃತ್ತಿಗೂ ಅದರದ್ದೇ ಆದ ಗೌರವವಿದೆ. ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಬೇಕು ಎಂದು ಶಿಕ್ಷಕರಾದ ಬಿ. ಅರ್ಕಪ್ಪ ಅವರು ತಿಳಿಸಿದರು.
ನಗರಸಭೆ ಸದಸ್ಯರಾದ ಹೆಚ್.ಎಸ್. ಮಮತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕರಾದ ಗುರುಲಿಂಗಯ್ಯ, ಸಮುದಾಯ ಮುಖಂಡರಾದ ಗು. ಪುರುಷೋತ್ತಮ್, ಶ್ರೀನಿವಾಸ್, ಪ್ರಕಾಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
