ಚಾಮರಾಜನಗರ: ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಜನವರಿ ೫ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರ ಪ್ರಕಾರ ಜಿಲ್ಲೆಯಲ್ಲಿ ೮೪೨೪೯೬ ಮತದಾರರಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ದಿನಾಂಕ: ೦೧.೦೧.೨೦೨೩ ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಇಂದು (ಜ.೫) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯೮೨ ಮತಗಟ್ಟೆಗಳಿವೆ. ಕರಡು ಮತದಾರರ ಪಟ್ಟಿಯಲ್ಲಿ ೮೩೪೮೭೨ ಮತದಾರರಿದ್ದರು. ಹೆಚ್ಚುವರಿ ಮತದಾರರ ಸಂಖ್ಯೆ ೭೬೨೪ ಇದ್ದು ಅಂತಿಮ ಮತದಾರರ ಪಟ್ಟಿಯಲ್ಲಿ ೮೪೨೪೯೬ ಮತದಾರರಿದ್ದಾರೆ ಎಂದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡಣೆ ಪೂರ್ವದಲ್ಲಿ ೨೪೭ ಮತಗಟ್ಟೆಗಳಿದ್ದವು. ಪುನರ್ ವಿಂಗಡಣೆ ನಂತರ ೨೫೩ ಮತಗಟ್ಟೆಗಳಿವೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡಣೆ ಪೂರ್ವದಲ್ಲಿ ೨೪೩ ಮತಗಟ್ಟೆಗಳಿದ್ದವು. ಪುನರ್ ವಿಂಗಡಣೆ ನಂತರ ೨೪೧ ಮತಗಟ್ಟೆಗಳಿವೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡಣೆ ಪೂರ್ವದಲ್ಲಿ ೨೩೯ ಮತಗಟ್ಟೆಗಳಿದ್ದವು. ಪುನರ್ ವಿಂಗಡಣೆ ನಂತರ ೨೩೯ ಮತಗಟ್ಟೆಗಳಿವೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡಣೆ ಪೂರ್ವದಲ್ಲಿ ೨೫೧ ಮತಗಟ್ಟೆಗಳಿದ್ದವು. ಪುನರ್ ವಿಂಗಡಣೆ ನಂತರ ೨೪೯ ಮತಗಟ್ಟೆಗಳಿವೆ ಎಂದು ವಿವರಿಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ೨೧೨೦೯೧ ಮತದಾರರಿದ್ದು, ೨೫೦೬ ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೨೧೪೫೯೭ ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ೨೧೧೧೩೪ ಮತದಾರರಿದ್ದು, ೯೪೭ ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೨೧೨೦೮೧ ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ೨೦೩೫೦೭ ಮತದಾರರಿದ್ದು, ೧೮೬೯ ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೨೦೫೩೭೬ ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ೨೦೮೧೪೦ ಮತದಾರರಿದ್ದು, ೨೩೦೨ ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೨೧೦೪೪೨ ಮತದಾರರಿದ್ದಾರೆ.
ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ಮತದಾರರು ಮತ್ತು ೧೮ ವರ್ಷ ಹಾಗೂ ಮೇಲ್ಪಟ್ಟ ಯುವ ಮತದಾರರ ಹೆಸರುಗಳನ್ನು ನಿರಂತರ ಪರಿಷ್ಕರಣೆ ಅವಧಿಯಲ್ಲಿ ಅರ್ಜಿ ಪಡೆದು, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಟೋಲ್‌ಫ್ರಿ ಸಂಖ್ಯೆ ೧೯೫೦ ಅನ್ನು ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
