ಚಾಮರಾಜನಗರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ನಗರದ ದೀನಬಂಧು ಶಾಲೆಯ ಮಕ್ಕಳಿಗೆ ಹಾಗೂ ಪಾರ್ವತಿ ಬಾಲ ಮಂದಿರದ ಮಕ್ಕಳಿಗೆ ಇಂದು ಹೆಲ್ತ್ ಕಿಟ್ ವಿತರಿಸಲಾಯಿತು.
ನಗರದ ರಾಮಸಮುದ್ರದಲ್ಲಿರುವ ದೀನಬಂಧು ಶಾಲೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ವಿದ್ಯಾರ್ಥಿಗಳಿಗೆ ಹೆಲ್ತ್ ಕಿಟ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಸಮಾಜದಲ್ಲಿ ಪುರುಷರಿಗೆ ಸಿಗುವ ಎಲ್ಲ ಅವಕಾಶಗಳು ಮಹಿಳೆಯರಿಗೂ ನ್ಯಾಯಸಮ್ಮತವಾಗಿ ಸಿಗಬೇಕು. ಮಹಿಳೆಯೂ ಸಹ ಪುರುಷರಷ್ಟೇ ಸರಿಸಮಾನರು ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ರೆಡ್ ಕ್ರಾಸ್ ಸೊಸೈಟಿಯಿಂದ ನೈರ್ಮಲ್ಯ ಕಿಟ್ ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸುತ್ತಿರುವುದು ಪ್ರಶಂಸನೀಯ ಕಾರ್ಯವೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾರಾಣಿ, ದೀನಬಂಧು ಸಂಸ್ಥೆಯ ಪ್ರೊ. ಜಯದೇವ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ.ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪಾರ್ವತಿ ಬಾಲ ಮಂದಿರದಲ್ಲಿ ಮಕ್ಕಳಿಗೆ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾರಾಣಿ ಅವರು ನೈರ್ಮಲ್ಯದ ಕಿಟ್ ಗಳನ್ನು ವಿತರಣೆ ಮಾಡಿದರು.
