ಚಾಮರಾಜನಗರ: ವಿಕಲಚೇತನರನ್ನು ಪ್ರೀತಿ, ಗೌರವದಿಂದ ಕಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬರು ನೆರವಾಗಬೇಕು ಎಂದು ವಸತಿ, ಮೂಲಸೌಲಭ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಇಲಾಖೆಗಳು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಮಿತಿ ಹಾಗೂ ಸ್ಥಳೀಯ ಸ್ವಯಂ ಸೇವಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹಲವು ಸೌಲಭ್ಯ, ಸವಲತ್ತುಗಳನ್ನು ಕಲ್ಪಿಸಿದೆ. ಶೇ. ೪೦ರಷ್ಟು ಅಂಗವಿಕಲತೆ ಹೊಂದಿರುವವರಿಗೆ ಈ ಹಿಂದೆ ನೀಡುತ್ತಿದ್ದ ೬೦೦ ರೂ. ಮಾಸಾಶನವನ್ನು ೮೦೦ಕ್ಕೆ ಏರಿಸಲಾಗಿದೆ. ಶೇ. ೭೫ರಷ್ಟು ಅಂಗವಿಕಲತೆ ಇರುವವರಿಗೆ ೧೨೦೦ರಿಂದ ೧೪೦೦ ರೂ. ಏರಿಕೆ ಮಾಡಲಾಗಿದೆ. ಅಲ್ಲದೇ ಬುದ್ದಿಮಾಂಧ್ಯರಿಗೆ ೧೨೦೦ ರೂ. ನಿಂದ ೨೦೦೦ ರೂ. ಗೆ ಹೆಚ್ಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ೨೦೪೬೦ ಅಂಗವಿಕಲರಿದ್ದಾರೆ. ೨೦೬ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ವಿಕಲಚೇತನರನ್ನು ವಿವಾಹವಾಗುವ ಅಂಗವಿಕಲರಿಗೆ ಸರ್ಕಾರದಿಂದ ೫೦ ಸಾವಿರ ರೂ. ಪ್ರೋತ್ಸಾಹಧನ, ಲ್ಯಾಪ್‌ಟಾಪ್ ವಿತರಣೆ, ೨೫ ಅಂಗವಿಕಲ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ, ೯೯೩ ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಣೆ ಮಾಡಲಾಗಿದೆ. ಹೆರಿಗೆಯಾಗುವ ದೃಷ್ಟಿಹೀನ ಹೆಣ್ಣು ಮಕ್ಕಳಿಗೆ ೨ ವರ್ಷಗಳ ಕಾಲ ಪ್ರತಿ ತಿಂಗಳು ೨ ಸಾವಿರ ಶಿಶುಪಾಲನಾ ಭತ್ಯೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸರ್ಕಾರದ ಯೋಜನೆಗಳ ಕುರಿತು ಅಂಗವಿಕಲರಿಗೆ ನಿರಂತರವಾಗಿ ಅರಿವು ಮೂಡಿಸುತ್ತಿದ್ದಾರೆ ಅಂಗವಿಕಲತೆ ಪ್ರಕೃತಿ ನಿಯಮವಾಗಿದೆ. ಅದನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಪ್ರಗತಿಯಲ್ಲಿ ವಿಕಲಚೇತನರ ಪಾತ್ರ ಪ್ರಮುಖವಾಗಿದೆ. ಇಂದು ಅಂಗವಿಕಲರು ದೇಶದ ಎಲ್ಲ ಅಭಿವೃದ್ಧಿ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ವಿಕಲಚೇತನ ಮಕ್ಕಳು ಜನಿಸಿದರೂ ಸಹ ತಾಯಿಂದಿರು ಎದೆಗುಂದದೇ ನೋವು, ಅಂತರಾಳದ ಭಾವನೆಗಳನ್ನು ಮೆಟ್ಟಿನಿಲ್ಲುವುದು ಭಾರತೀಯ ಸಂಸ್ಕೃತಿಯಾಗಿದೆ. ಅಂಗವಿಕಲರನ್ನು ಸಮಾಜದ ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಎಂತಹುದೇ ಸನ್ನಿವೇಶ, ಸಂದರ್ಭ ಎದುರಾದರೂ ಪೋಷಕರು ಧೃತಿಗೆಡಬಾರದು. ಸರ್ಕಾರ ನಿಮ್ಮ ಜೊತೆಗಿದೆ ವಿಕಲಚೇತನ ದೈಹಿಕ, ಮಾನಸಿಕ ಅಂಗವಿಕಲತೆಯಿಂದ ಬಳಲುವ ಮಕ್ಕಳಿಗೆ ಆತ್ಮಸ್ಥೈರ್ಯ ಹಾಗೂ ಮನೋಸ್ಥೈರ್ಯ ತುಂಬುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂಗವಿಕಲರನ್ನು ವಸತಿ, ಮೂಲಸೌಲಭ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಹಾಗೂ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಡಿವೈಎಸ್‌ಪಿ ಪ್ರಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೀಪಾ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.

 ಕಾರ್ಯಕ್ರಮದ ಬಳಿಕ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.