ಮೈಸೂರು: ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಾ ಬರುತ್ತಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಅವರು ಎಲೆಯಮರೆಯ ಕಾಯಿಯಂತೆ ತಮ್ಮ ಪಾಡಿಗೆ ಸೇವೆ ಮಾಡುತ್ತಾ ಅದರಲ್ಲಿಯೇ ತೃಪ್ತಿ ಪಡುತ್ತಿರುತ್ತಾರೆ. ಇಂತಹವರನ್ನು ಗುರುತಿಸದ ಕಾರಣ ಅವರು ಕಾರ್ಯಗಳು ಬೆಳಕಿಗೆ ಬರುವುದೇ ಇಲ್ಲ. ಇಂತಹವರ ಪೈಕಿ ಮೈಸೂರಿನ ನಿವಾಸಿ ರಂಗಸ್ವಾಮಿ ಎಂಬುವರು ಒಬ್ಬರಾಗಿದ್ದಾರೆ.
ಮೈಸೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಇವರು ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಕಪ್ಪು ಹಲಗೆಯನ್ನು ಶಿಕ್ಷಕರು ಬರೆಯಲು ಅನುಕೂಲವಾಗುವಂತೆ ಬಣ್ಣ ಹಚ್ಚಿ ಬರುವ ಕಾಯಕವನ್ನು ಮಾಡುತ್ತಿದ್ದಾರೆ. ಇದುವರೆಗೆ ಇವರು ಮೈಸೂರು ಮಾತ್ರವಲ್ಲದೆ ಇತರೆ ಜಿಲ್ಲೆಗಳಿಗೂ ತೆರಳಿ ತಮ್ಮ ಕಾಯಕವನ್ನು ಮಾಡಿದ್ದು 3854 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಬರೆಯುವ ಕಪ್ಪು ಹಲಗೆ (ಬೋರ್ಡ್) ಗೆ ಬಣ್ಣ ಹಚ್ಚಿ ಶಿಕ್ಷಕರು ಉತ್ತಮವಾಗಿ ಬರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇವತ್ತಿಗೂ ಸೈಕಲ್‌ನಲ್ಲಿಯೇ ತೆರಳಿ ಬಡತನದ ನಡುವೆಯೂ ಸಮಾಜ ಸೇವೆ ಮಾಡುತ್ತಿರುವುದು ಮೆಚ್ಚತಕ್ಕ ಸಂಗತಿಯಾಗಿದೆ.
ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಮಸುಕಾಗಿದ್ದ ಶಾಲಾ ತರಗತಿಯ ಕಪ್ಪು ಹಲಗೆ (ಬೋರ್ಡ್) ಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಅದಕ್ಕೆ ಹಚ್ಚುವ ಕೆಲಸವನ್ನು ಶಿಕ್ಷಕರು ಅವರಿಗೆ ವಹಿಸುತ್ತಿದರಂತೆ. ಇದರಿಂದ ಪ್ರೇರಿತರಾದ ಅವರು ಈಗಲೂ ಸರ್ಕಾರಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲಗೆಗೆ ಬಣ್ಣ ಹಚ್ಚುತ್ತಿದ್ದಾರೆ. ಇದರಿಂದ ಯಾವ ಲಾಭವೂ ಅವರಿಗಿಲ್ಲವಾದರೂ ಇದು ನನಗೆ ಖುಷಿ ಕೊಡುತ್ತದೆ ಆ ಮೂಲಕ ಸಮಾಜಸೇವೆ ಮಾಡಿದ ತೃಪ್ತಿ ಸಿಗುತ್ತದೆ ಎಂಬುದಾಗಿ ಹೇಳುವ ಅವರು ನಮ್ಮಂತಹ ಬಡವರಿಂದ ದೊಡ್ಡದಾದ ಯಾವ ಕೊಡುಗೆಯನ್ನು ಸಮಾಜಕ್ಕೆ ಕೊಡಲು ಸಾಧ್ಯವಿಲ್ಲ. ಆದರೆ ಕನ್ನಡಕ್ಕೆ ಸಣ್ಣದಾದ ಅಳಿಲು ಸೇವೆಯನ್ನು ಕಪ್ಪುಹಲಗೆಯನ್ನು ಹೊಳಪು ಮಾಡಿ ಅದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತಿರುವುದಾಗಿ ಅಭಿಮಾನದಿಂದ ನುಡಿಯುತ್ತಾರೆ.
ಪರಿಸರ ಪ್ರೇಮಿ ಆಗಿರುವ ಇವರು ಸೈಕಲ್ ನಲ್ಲಿಯೇ ಎಲ್ಲೆಡೆಗೂ ಪ್ರಯಾಣ ಮಾಡುತ್ತಾರೆ. ಸೈಕಲ್ ಮೂಲಕವೇ ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಿಗೆ ತೆರಳಿ ಸೇವೆ ಮಾಡಿರುವುದು ವಿಶೇಷ. ಬಿಳಿಯ ಉಡುಪು ಹಳೆಯ ಸೈಕಲ್ ಇವರ ಆಸ್ತಿ. ಸೈಕಲ್ ನಲ್ಲಿ ಅಳವಡಿಸಿರುವ ಚಿಕ್ಕ ನಾಮಫಲಕದಲ್ಲಿ ಬರೆದಿರುವ ವಿದ್ಯೆ ಕಡಿಮೆ ಇದ್ದರೂ ಪರವಾಗಿಲ್ಲ ನಮ್ಮ ನಡತೆ ಶುದ್ಧವಾಗಿರಬೇಕು ಎಂಬ ಸಾಲು ಎಲ್ಲರ ಗಮನಸೆಳೆಯುತ್ತದೆ.
ದೊಡ್ಡ ದೊಡ್ಡ ಸಮಾಜ ಸೇವಕರ ನಡುವೆ ಶಾಲೆಯನ್ನೇ ದೇವಾಲಯವೆಂದು, ಅಲ್ಲಿ ಕಲಿಯುವ ಮಕ್ಕಳೇ ಭವಿಷ್ಯದ ಪ್ರಜೆಗಳಾಗಿದ್ದು ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಪ್ಪುಹಲಗೆಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಬಣ್ಣ ಬಳಿಯುವ ಕೆಲಸ ಮಾಡುತ್ತಾ ಬಂದಿರುವ ರಂಗಸ್ವಾಮಿ ಕಾಯಕ ನಿಜಕ್ಕೂ ಮೆಚ್ಚಲೇ ಬೇಕಾಗಿದೆ.